ತಾಸೆ ಪೆಟ್ಟಿಗೆ ವೇದಿಕೆಯೇರಿ ಹೆಜ್ಜೆ ಹಾಕಿದ ಮರಿಹುಲಿಗಳು… ವ್ಯಾಘ್ರಗಳ ಮಧ್ಯೆ ಗಮನ ಸೆಳೆದ ಬಾಲಕೃಷ್ಣ… ಅಷ್ಟಮಿಗೂ ಮುನ್ನವೇ ಮೊಸರು ಕುಡಿಕೆ ಒಡೆದು ಸಂಭ್ರಮಿಸಿದ ಚಿಣ್ಣರು…
ಮಂಗಳೂರು ರಥಬೀದಿ ಬಿ.ಇ.ಎಂ. ಶಿಕ್ಷಣ ಸಂಸ್ಥೆ ಅಧೀನದಲ್ಲಿರುವ ಹೆಡ್‍ಸ್ಟಾರ್ಟರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕುಟುಂಬ ದಿನಾಚರಣೆ, ರಕ್ಷಾಬಂಧನ, ಶ್ರೀ ಕೃಷ್ಣ ಜನ್ಮಾಷ್ಟಮಿ, ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪುಟಾಣಿಗಳು ನೀಡಿದ ಸಾಂಸ್ಕøತಿಕ ಕಾರ್ಯಕ್ರಮದ ಝಲಕ್ ಇದು. ನೇತಾಜಿ ಸುಭಾಷ್‍ಚಂದ್ರ ಬೋಸ್, ಶ್ರೀ ಕೃಷ್ಣ… ಅಜ್ಜ ಅಜ್ಜಿಯರ ವೇಷ ಸೇರಿದಂತೆ ಬಣ್ಣ ಬಣ್ಣದ ಉಡುಗೆ ತೊಟ್ಟ ನರ್ಸರಿ, ಎಲ್‍ಕೆಜಿ, ಯುಕೆಜಿ ಹಾಗೂ ಒಂದನೇ ತರಗತಿ ವಿದ್ಯಾರ್ಥಿಗಳು ತಾಸೆ ಪೆಟ್ಟಿಗೆ ಹೆಜ್ಜೆ ಹಾಕುತ್ತಲೇ ವೇದಿಕೆಯಲ್ಲಿ ಕಟ್ಟಲಾಗಿದ್ದ ಬಲೂನು ಒಡೆದು ಸಂಭ್ರಮಿಸುವ ಮೂಲಕ ಅಷ್ಟಮಿಗೂ ಮುನ್ನವೇ ಶ್ರೀ ಕೃಷ್ಣ ಲೀಲೋತ್ಸವದ ಸೊಬಗು ಉಣಬಡಿಸಿದರು.
ಇದಕ್ಕೂ ಮುನ್ನ ವಿವಿಧ ನೃತ್ಯ, ಸಮೂಹಗೀತೆಗಳ ಮೂಲಕ ಗಮನ ಸೆಳೆದ ಚಿಣ್ಣರು, ರಾಷ್ಟ್ರ ಧ್ವಜ, ಲಾಂಛನ, ಪಕ್ಷಿ, ರಾಷ್ಟ್ರೀಯ ಪ್ರಾಣಿ ಇವೇ ಮುಂತಾದವುಗಳ ಚಿತ್ರಗಳನ್ನು ಹಿಡಿದು ಸ್ವಾತಂತ್ರ್ಯ ದಿನದ ಮಹತ್ವದ ಬಗ್ಗೆ ಅರಿವು ಮೂಡಿಸಿದರು. ಮಣ್ಣಗುಡ್ಡೆ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಜಾಯ್ಸ್ ಹೆನ್ಸಿಟಾ ಮಾತನಾಡಿ, ಮಕ್ಕಳಿಗೆ ಪಠ್ಯಕ್ಕಿಂತ ಹೆಚ್ಚಾಗಿ ಜೀವನ ಕೌಶ¯ದ ಪಾಠ ಹೇಳಿಕೊಡುವ ಅಗತ್ಯವಿದೆ. ಅಂಕ ಗಳಿಕೆಗಿಂತ ಸ್ವಾವಲಂಬಿ ಜೀವನ ಹೇಗೆ ಸಾಗಿಸಬಹುದು ಎಂಬುದನ್ನು ಪಾಲಕರು ತಿಳಿ ಹೇಳಿಕೊಡಬೇಕು. ಶಿಕ್ಷಕರು, ಪಾಲಕರು ಹಾಗೂ ಆಡಳಿತ ಮಂಡಳಿಯ ನಡುವೆ ಅನ್ಯೋನ್ಯತೆ ಇದ್ದರೆ ಶಾಲಾ ಶಿಕ್ಷಣದ ಗುಣಮಟ್ಟ ತನ್ನಿಂತಾನೇ ಸುಧಾರಣೆಯಾಗುತ್ತದೆ ಎಂದು ಹೇಳಿದರು.
ಬಿ.ಇ.ಎಂ. ಶಿಕ್ಷಣ ಸಂಸ್ಥೆಗಳ ಸಂಚಾಲಕ ರೋಹನ್ ಶಿರಿ ಮಾತನಾಡಿ, ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಪಾಲಕರು ನೀಡುವ ಸಲಹೆಗಳನ್ನು ಸ್ವೀಕರಿಸಿ ಅದನ್ನು ಅನುಷ್ಟಾನಕ್ಕೆ ತರಲು ಸಂಸ್ಥೆ ಬದ್ಧವಾಗಿದೆ ಎಂದರು. ನೂತನ ಶಾಲಾ ಕಟ್ಟಡ ನಿರ್ಮಾಣ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಪಾಲಕರ ಪರವಾಗಿ ಗಿರೀಶ್ ಹಾಗೂ ಉದಯ ಆಚಾರ್ ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಕಿ ಜಾಯ್ ಫುರ್ಟಾಡೋ ಪ್ರಾರ್ಥಿಸಿದರೆ, ಸ್ಮಿತಾ ಗಿರೀಶ್ ಸ್ವಾಗತಿಸಿದರು. ಅನಿತಾ ರಾವ್ ಕಾರ್ಯಕ್ರಮ ನಿರೂಪಿಸಿದರು. ಚೇತನಾ ಕಾಮತ್ ವಂದಿಸಿದರು. ಸಿಬ್ಬಂದಿ ಸರಸ್ವತಿ ಸಹಕರಿಸಿದರು.